ಗೊರವಿ

ಇಕ್ಸೋರ ಆರ್ಬೋರಿಯ ಎಂಬ ವೈಜ್ಞಾನಿಕ ಹೆಸರಿನ ಒಂದು ನಿತ್ಯ ಹರಿದ್ವರ್ಣದ ಮತ್ತು ಸಣ್ಣ ಗಾತ್ರದ ಕಾಡುಮರ. ರೂಬಿಯೇಸೀ ಕುಟುಂಬಕ್ಕೆ ಸೇರಿದೆ. ಭಾರತಾದ್ಯಂತ ವ್ಯಾಪಿಸಿರುವ ಈ ಮರ ಪ್ರಮುಖವಾಗಿ ಗಂಗಾನದಿಯ ಬಯಲು, ಅಸ್ಸಾಂ, ಕೇರಳ, ಕರ್ನಾಟಕ ಮತ್ತು ನಿಕೋಬಾರ್‍ಗಳಲ್ಲಿ ಬೆಳೆಯುತ್ತದೆ. ನಸುಗೆಂಪು ಅಥವಾ ಬಿಳಿಯ ಬಣ್ಣದ ಪರಿಮಳಯುಕ್ತ ಹೂ ಬಿಡುವುದರಿಂದ ಇದನ್ನು ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದೂ ಉಂಟು. 

ಗೊರವಿಯ ಎಲೆಗಳು ಸರಳರೀತಿಯವು; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವಕ್ಕೆ ಹೊಳೆಯುವ ಹಾಗೂ ರೋಮರಹಿತ ಮೇಲುಮೈ, ದೀರ್ಘ ಅಂಡಾಕಾರ, ಪುಟ್ಟ ತೊಟ್ಟು ಮತ್ತು ಎರಡು ವೃಂತಪತ್ರಗಳು ಇವೆ. ಹೂಗಳು ಚಿಕ್ಕಗಾತ್ರದವು; ಕಾರಿಂಬ್ ಮಾದರಿಯ, ದೊಡ್ಡ ಗಾತ್ರದ, ಅಗ್ರಸ್ಥವಾದ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಫಲಗಳು ಬೆರಿ  ಮಾದರಿಯವು: ಕಪ್ಪಗೆ ಗುಂಡಗೆ ಇವೆ. 

ಗೊರವಿಯ ಹೂ, ಹಣ್ಣು ತೊಗಟೆ ಮತ್ತು ಬೇರುಗಳಿಗೆ ಔಷಧೀಯ ಪ್ರಾಮುಖ್ಯವುಂಟು. ಹೂಗಳನ್ನು ಹಾಲಿನೊಂದಿಗೆ ಸೇರಿಸಿ ಕುಟ್ಟಿ ನಾಯಿಕೆಮ್ಮಿಗೆ ಮದ್ದಾಗಿ ಬಳಸುತ್ತಾರೆ. ರಕ್ತಹೀನತೆ ಮತ್ತು ನಿಶ್ಯಕ್ತಿಗಳ ಚಿಕಿತ್ಸೆಗೆ ತೊಗಟೆಯ ಕಷಾಯ ಒಳ್ಳೆಯ ಔಷಧಿ ಎನ್ನಿಸಿದೆ. ಗೊರವಿಯ ಎಲೆಗಳು ದನಗಳಿಗೆ ಒಳ್ಳೆಯ ಮೇವು. ಗೊರವಿಯ ಚೌಬೀನೆ ನಯವಾಗಿಯೂ ಗಟ್ಟಿಯಾಗಿಯೂ ಭಾರವಾಗಿಯೂ ಇದೆ. ಇದರ ಬಣ್ಣ ಕಂದು ಇದು ಒಳ್ಳೆಯ ಮೆರುಗು ತೆಗೆದುಕೊಳ್ಳುತ್ತದಲ್ಲದೆ ಕೆತ್ತನೆ ಕೆಲಸಗಳಿಗೆ ಸುಲಭವಾಗಿ ಒಗ್ಗುತ್ತದೆ. ಇದರಿಂದ ಪೀಠೋಪಕರಣಗಳನ್ನು  ತಯಾರಿಸುವುದುಂಟು.
(ಟಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ